ಭಾರತದ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಒಂದು ಉಪವಿಭಾಗ, ತಾಲ್ಲೂಕು ಮತ್ತು ಪಟ್ಟಣ. ಉಪ ವಿಭಾಗ ಲಿಂಗಸುಗೂರು, ಸಿಂಧನೂರು ಮತ್ತು ಮಾನ್ವಿ ತಾಲ್ಲೂಕುಗಳನ್ನೊಳ ಗೊಂಡಿದೆ. ಈ ತಾಲ್ಲೂಕನ್ನು ದಕ್ಷಿಣದಲ್ಲಿ ಕುಷ್ಟಗಿ, ಸಿಂಧನೂರು ತಾಲ್ಲೂಕುಗಳೂ ಪೂರ್ವಕ್ಕೆ ಮಾನ್ವಿ, ದೇವದುರ್ಗ ತಾಲ್ಲೂಕುಗಳೂ ಉತ್ತರಕ್ಕೆ ಗುಲ್ಬರ್ಗ ಜಿಲ್ಲೆ, ಪಶ್ಚಿಮದಲ್ಲಿ ಬಿಜಾಪುರ ಜಿಲ್ಲೆ ಸುತ್ತುವರಿದಿವೆ. ಮುದ್ಗಲ್ಲು, ಲಿಂಗಸುಗೂರು, ಗುರ್ಗುಂಟೆ ಮತ್ತು ಮಸ್ಕಿ ಹೋಬಳಿಗಳು. ಒಟ್ಟು ಗ್ರಾಮಗಳ ಸಂಖ್ಯೆ 192, ವಿಸ್ತೀರ್ಣ 1,947 ಚ.ಕಿಮೀ.  ಜನಸಂಖ್ಯೆ 3,20,879.

ತಾಲ್ಲೂಕಿನ ಹೆಚ್ಚಿನ ಭಾಗ ವಿಸ್ತಾರವಾದ ಬಯಲುಗಳಿಂದ ಕೂಡಿದ ಪ್ರದೇಶ.  ಧಾರವಾಡ ಶಿಲೆ ತಳಶಿಲೆಯಾಗಿದ್ದು ಎರೆಮಣ್ಣಿನಿಂದ ಕೂಡಿದ ಈ ಪ್ರದೇಶದಲ್ಲಿ ಕೆಲವು ಸ್ಥಳಗಳಲ್ಲಿ ಚಿನ್ನ ದೊರೆಯುತ್ತದೆ. ಹಟ್ಟಿ, ಮಸ್ಕಿ ಇವುಗಳ ಬಳಿಯ ಚಿನ್ನದ ನಿಕ್ಷೇಪಗಳು ಪ್ರಸಿದ್ಧವಾದವು.  ತಾಲ್ಲೂಕಿನ ಉತ್ತರಭಾಗದಲ್ಲಿ ಉತ್ತರ ಗಡಿಯಾಗಿ ಕೃಷ್ಣಾನದಿ ಇದೆ. ಇದು ಉಪ್ಪಿನಹಳ್ಳ ಗ್ರಾಮದ ಬಳಿ ತಾಲ್ಲೂಕನ್ನು ತಾಗಿ ಪೂರ್ವಾಭಿ ಮುಖವಾಗಿ ಸಾಗುತ್ತದೆ. ಇದನ್ನು ಬಿಟ್ಟರೆ ತಾಲ್ಲೂಕಿನಲ್ಲಿ ಕೆಲವು ಹಳ್ಳಗಳು ಮಾತ್ರ ಇವೆ. ಅವುಗಳಲ್ಲಿ ಮುಖ್ಯವಾದವು ಹಟ್ಟಿಹಳ್ಳ ಮತ್ತು ಹಿರೇಹಳ್ಳ. ಹಟ್ಟಿಹಳ್ಳ ತಾಲ್ಲೂಕಿನ ಪೂರ್ವಭಾಗದಲ್ಲಿ ಹರಿದು ದಕ್ಷಿಣದಿಂದ ಉತ್ತರಕ್ಕೆ ಗುರ್ಗುಂಟೆಯ ಉತ್ತರದಲ್ಲಿ ಕೃಷ್ಣಾನದಿಯನ್ನು ಕೂಡುವುದು. ಹಿರೇಹಳ್ಳ ತಾಲ್ಲೂಕಿನ ದಕ್ಷಿಣಭಾಗದಲ್ಲಿ ನೈಋತ್ಯದಿಂದ ಈಶಾನ್ಯಕ್ಕೆ ಸ್ವಲ್ಪದೂರ ಹರಿದು, ಅನಂತರ ಆಗ್ನೇಯಕ್ಕೆ ತಿರುಗಿ ಮುಂದೆ ಪೂರ್ವಾಭಿ ಮುಖವಾಗಿ ಮಾನ್ವಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ಈ ತಾಲ್ಲೂಕಿನ ಪೂರ್ವದಲ್ಲಿ ಸ್ವಲ್ಪದೂರ ಮಸ್ಕಿ ಹೋಬಳಿ ಮುಖಾಂತರ ತುಂಗಭದ್ರಾ ಎಡದಂಡೆಯ ಮುಖ್ಯನಾಲೆ ಹಾದುಹೋಗಿದೆ. ಕೃಷ್ಣಾನದಿಯ ಹರಿವಿನಿಂದ ತಾಲ್ಲೂಕಿನ ಪೂರ್ವದಲ್ಲಿ ಫಲವತ್ತಾದ ಕೆಲವು ನಡುಗುಡ್ಡೆಗಳು ಇವೆ. ಆ ನದಿಯ ತೀರದ ಉದ್ದಕ್ಕೂ ಕಪ್ಪುಮರಳು ಪ್ರದೇಶವಿದ್ದು ಅರಣ್ಯದಿಂದ ಕೂಡಿದೆ. ಜೋಳ, ನೆಲಗಡಲೆ, ಹತ್ತಿ ಈ ತಾಲ್ಲೂಕಿನ ಮುಖ್ಯ ಬೆಳೆಗಳು. ದ್ವಿದಳ ಧಾನ್ಯಗಳು, ಸಜ್ಜೆ, ಬತ್ತ, ಗೋದಿ ಮತ್ತು ಸ್ವಲ್ಪ ಕಬ್ಬನ್ನೂ ಕೆಲವೊಂದು ಹಣ್ಣುಗಳನ್ನೂ ತರಕಾರಿಗಳನ್ನೂ ಬೆಳೆಯುತ್ತಾರೆ.
ಈ ತಾಲ್ಲೂಕಿನ ಹೆಸರಿಸಬಹುದಾದ ಕೈಗಾರಿಕಾ ಉದ್ಯಮವೆಂದರೆ ಹಟ್ಟಿ ಚಿನ್ನದ ಗಣಿ. ಹಿಂದೆ ಮಸ್ಕಿಯಲ್ಲೂ ಗಣಿಕೆಲಸ ನಡೆಯುತ್ತಿತ್ತು.  ಈಗ ನಿಂತಿದೆ. ತಾಲ್ಲೂಕಿನಲ್ಲಿ ಹತ್ತಿ ಎಕ್ಕುವ ಕೆಲವು ಕಾರ್ಖಾನೆಗಳಿವೆ.  ಕೈಮಗ್ಗದ ಬಟ್ಟೆ ತಯಾರಿಕೆಯುಂಟು. ಗಂಗಾವತಿ-ಲಿಂಗಸುಗೂರು-ಸುರಪುರಮಾರ್ಗ ತಾಲ್ಲೂಕಿನ ಹೆದ್ದಾರಿ. ಮುದ್ಗಲ್ಲು-ಕುಷ್ಟಗಿ, ಮುದ್ಗಲ್ಲು-ಹುನಗುಂದ, ಲಿಂಗಸುಗೂರು-ಸಿಂಧನೂರು, ಲಿಂಗಸುಗೂರು-ರಾಯಚೂರು ರಸ್ತೆಮಾರ್ಗಗಳು ತಾಲ್ಲೂಕಿನ ಇತರ ಭಾಗಗಳಿಗೆ ಸಂಪರ್ಕ ಒದಗಿಸುತ್ತವೆ.

ಈ ತಾಲ್ಲೂಕಿನ ಮುಖ್ಯಸ್ಥಳಗಳಲ್ಲಿ ದೇವರಭೂಪುರ ಲಿಂಗಸುಗೂರಿಗೆ ಈಶಾನ್ಯದಿಕ್ಕಿನಲ್ಲಿ 17ಕಿಮೀ ದೂರದಲ್ಲಿದೆ. ಈ ಊರು ಬೆಲ್ಲ ತಯಾರಿಕೆಗೆ ಮತ್ತು ಇಲ್ಲಿರುವ ಅಮರೇಶ್ವರ ದೇವಾಲಯಕ್ಕೆ ಪ್ರಸಿದ್ಧ. ಲಿಂಗಸುಗೂರಿಗೆ ಈಶಾನ್ಯದಲ್ಲಿರುವ ಗುರ್ಗುಂಟೆ ಹೋಬಳಿ ಕೇಂದ್ರ. ಹಿಂದೆ ಇದೊಂದು ಚಿಕ್ಕ ಸಂಸ್ಥಾನವಾಗಿತ್ತು. ಲಿಂಗಸುಗೂರಿಗೆ ಸು. 17ಕಿಮೀ ದೂರದಲ್ಲಿ ಹಟ್ಟಿ (ನೋಡಿ) ಚಿನ್ನದ ಗಣಿಗಳಿವೆ. ಲಿಂಗಸುಗೂರಿನ ವಾಯವ್ಯಕ್ಕೆ ಸು. 13ಕಿಮೀ ದೂರದಲ್ಲಿರುವ ಜಲದುರ್ಗ ಕೃಷ್ಣಾನದಿಯಿಂದ ಸುತ್ತುವರಿದ ಪ್ರದೇಶ. ಇಲ್ಲಿ ಒಂದು ಹಳೆಯ ಕೋಟೆ ಇದೆ. ಲಿಂಗಸುಗೂರಿನ ಆಗ್ನೇಯದಲ್ಲಿ ಸು. 27ಕಿಮೀ ದೂರದಲ್ಲಿರುವ ಮಸ್ಕಿ (ನೋಡಿ), ನೈಋತ್ಯದಲ್ಲಿ 16ಕಿಮೀ ದೂರದಲ್ಲಿರುವ ಮುದ್ಗಲ್ಲು ಹೋಬಳಿ ಕೇಂದ್ರಗಳು ಹಾಗೂ ಇತಿಹಾಸ ಪ್ರಸಿದ್ಧ ಸ್ಥಳಗಳು. ಲಿಂಗಸುಗೂರಿನ ಆಗ್ನೇಯದಲ್ಲಿ, ಮಸ್ಕಿಯ ಉತ್ತರದಲ್ಲಿ ಸು. 5ಕಿಮೀ ದೂರದಲ್ಲಿರುವ ವೆಂಕಟಾಪುರ ಗ್ರಾಮದ ಬಳಿ ಇರುವ ಎರಡು ಬೆಟ್ಟಗಳ ನಡುವೆ ಬೃಹತ್ ಶಿಲಾಯುಗದ ಸಮಾಧಿಗಳಿವೆ.

ಲಿಂಗಸುಗೂರು ಈ ತಾಲ್ಲೂಕು ಮತ್ತು ಉಪವಿಭಾಗದ ಆಡಳಿತ ಕೇಂದ್ರ.  ರಾಯಚೂರಿನ ಪಶ್ಚಿಮಕ್ಕೆ 93 ಕಿಮೀ ದೂರದಲ್ಲಿದೆ. 1905ರ ವರೆಗೆ ಇದೇ ಜಿಲ್ಲಾ ಕೇಂದ್ರವಾಗಿತ್ತು. ಜನಸಂಖ್ಯೆ 73,553. ಈ ಸುತ್ತ ಲಪ್ರದೇಶಕ್ಕೆ ಇದು ಮುಖ್ಯ ವ್ಯಾಪಾರ ಸ್ಥಳ. ನೆಲಗಡಲೆ ಮತ್ತು ಹತ್ತಿ ಯ ವ್ಯಾಪಾರ ವಿಶೇಷವಾಗಿ ನಡೆಯುತ್ತದೆ. ಪಟ್ಟಣ ಪುರಸಭಾಡಳಿತಕ್ಕೆ ಒಳಪಟ್ಟಿದೆ. ಈ ಪಟ್ಟಣದ ಬಳಿ ಒಂದು ದೊಡ್ಡಕೆರೆ ಇದೆ. ಪಟ್ಟಣದಲ್ಲಿರುವ ಕುಪ್ಪೇರಾಯನ ದೇವಾಲಯ ಪ್ರಸಿದ್ಧ. ರಾಯರ ಮಠದ ವರದೇಂದ್ರರ ವೃಂದಾವನ ಇಲ್ಲಿದೆ.
	
(ಪಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ